ನನಗಿನ್ನೂ ಚೆನ್ನಾಗಿ ನೆನಪಿದೆ.. ಶಾಲೆಯಲ್ಲಿ ಅರಳಿದ ಮುಖಗಳಿಂದ ನಾನು ನನ್ನ ಸ್ನೇಹಿತರೆಲ್ಲಾ , “ನಾನು ಸೈಂಟಿಸ್ಟ್ ಆಗ್ತೀನಿ”, “ಡಾಕ್ಟರ್ ಆಗ್ತೀನಿ”, “ಡೈರೆಕ್ಟರ್ ಆಗ್ತೀನಿ” ಅಂತೆಲ್ಲ ಹೇಳ್ತಿದ್ರು. ಆದ್ರೆ 20 ವರ್ಷ ಆದ್ಮೇಲೆ ಇವಾಗ ಎಷ್ಟೋ ಕನಸುಗಳು ಚಿವುಟಿ ಕೆಲವ್ರು ಮಾತ್ರ ಅಂದುಕೊಂಡ ಹಾಗೆ ಆಗಿದಾರೆ. ಅದ್ರಲ್ಲಿ ನಾನು ಇಂಜಿನಿಯರ್ ಆದೆ. ನಾನು ಅಂಕೊಂಡಂಗೆ ಆದೆ. ಆದ್ರೆ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನೋ ಗಾದೆ ಮಾತಿನ ತರ ಅವಾಗ ಇಷ್ಟ ಪಟ್ಟಿದ್ದ ಕೆಲಸ ಮಾಡುತ್ತಿರುವಾಗ ಇಷ್ಟವಾಗ್ತಿಲ್ಲ. ಇವಾಗ ನನ್ನೊಳಗೆ ಇದ್ದ ಹವ್ಯಾಸಗಳು ನನ್ನನ್ನು ತುಂಬಾ ಕಾಡುತ್ತವೆ. ನನ್ನೊಳಗೆ ಒಬ್ಬ ಚಿತ್ರ ಕಲೆಗಾರ ಇದ್ದಾನೆ, ಕವಿ ಇದ್ದಾನೆ, ಸಿನೆಮಾ ನಿರ್ದೇಶಕನೂ ಇದ್ದಾನೆ. ಎಷ್ಟು ಉತ್ತಮ ಕವಿ, ಕಲೆಗಾರ ಎಂದು ಹೇಳುವುದು ಕಷ್ಟ. ಆದರೂ ಮನಸ್ಸಿಗೆ ಇಷ್ಟ ಎಂಬುದನ್ನು ಮಾತ್ರ ಹೇಳಬಲ್ಲೆ.
ಬದುಕಿನ ಚಕ್ರದಲ್ಲಿ ದುಡ್ಡಿಗೆ ಇರುವ ಪ್ರಾಮುಖ್ಯತೆ ನನ್ನನ್ನು ಬಹಳವಾಗಿ ಕಾಡುತ್ತದೆ. ಹೀಗೇಕೆ ಎನ್ನಿಸುತ್ತದೆ ಎಲ್ಲರೂ ಬದುಕುವುದಷ್ಟೇ ಮುಖ್ಯ ಎಂದಾದರೆ ದುಡ್ಡಿಗೆ ಆ ಸುಂದರ ಪ್ರಪಂಚದಲ್ಲಿ ಜಾಗವಿರಬಾರದು. ದುರದೃಷ್ಟವಶಾತ್ ನಮ್ಮ ಜೀವನದಲ್ಲಿ ದುಡ್ಡು ಹೇಗೋ ಬಂದು ಆವರಿಸಿಕೊಂಡು ಬಿಟ್ಟಿದೆ. ಅದರ ಗೀಳಿನಿಂದಲೇ ನನ್ನ ವೃತ್ತಿಗೆ ನಾನು ಕಟ್ಟು ಬಿದ್ದಂತಾಗಿದೆ. ನಾವು ಅಂದುಕೊಂಡಂತೆ ಬದುಕಲು ದುಡ್ಡು ಎಷ್ಟು ಮುಖ್ಯವೋ ಅಷ್ಟೇ ದೊಡ್ಡ ಅಡ್ಡಗಾಲು ಕೂಡ ಆಗಿದೆ. ನನಗೊಂದು ದಿನ ನನಗೆ ಅಷ್ಟೊಂದು ಧೈರ್ಯ ಬಂದು ನನ್ನ ಹವ್ಯಾಸದ ಇಷ್ಟದ ಕೆಲಸ ಮಾಡುತ್ತೇನೆ ಎಂಬ ನಂಬಿಕೆ ನನಗಿದೆ. ಈ ಕಾರ್ಪೊರೇಟ್ ಬದುಕು ಇದ್ದೂ ಏನೂ ಇಲ್ಲದ ಹಾಗಿದೆ. “ಇರುವುದೆಲ್ಲ ಬಿಟ್ಟು ಇರದುರೆಡೆಗೆ ತುಡಿವುದೇ ಜೀವನ” ಇನ್ನೊಂದು ಕಡೆ ಈ ಸಾಲುಗಳು ಮನದ ಮೂಲೆಯಲ್ಲಿ ಪ್ರತಿಧ್ವನಿಸುತ್ತವೆ
ನನ್ನ ಕಥೆ ಬಿಡಿ, ನೀವು ಏನಾ ಗಲು ಬಯಸಿದ್ದು, ಏನಾಗಿದ್ದೀರೀ, ಇನ್ನೂ ಏನಾಗಬೇಕು ಅನ್ನಿಸುತ್ತಿದೆ ಕಾಮ್ಮೆಂಟ್ ಮೂಲಕ ತಿಳಿಸಿ.
- ಗೀತ ಲಹರಿ